ಭೂಭೌತ ಸರ್ವೇಕ್ಷಣೆ

	ಭೂಮಿಯ ಭೌತಲಕ್ಷಣಗಳನ್ನು ಗುರುತಿಸಿ ಖನಿಜ ಸಂಪನ್ಮೂಲಗಳ ಬಗೆಗಿನ ನಿರ್ದಿಷ್ಟ ಚಿತ್ರರೂಪಿಸುವ ಕ್ರಿಯೆ (ಜಿಯೊಫಿಸಿಕಲ್ ಸರ್ವೆ). ಜೀವನಕ್ಕೆ ಅತ್ಯಗತ್ಯವಾಗಿ ಬೇಕಾದ ಖನಿಜಗಳು, ಪೆಟ್ರೋಲ್ ಮತ್ತು ಇಂಧನಾನಿಲಗಳನ್ನು ಅನ್ವೇಷಿಸುವುದರಲ್ಲಿ ಭೂಭೌತ ವಿಧಾನಗಳನ್ನು ವಿಶೇಷವಾಗಿ ಬಳಸಲಾಗುತ್ತಿದೆ. ಇವೇ ಅಲ್ಲದೆ ಭಾರಿ ಪ್ರಮಾಣದ ಜಲಾಶಯಗಳ ಕಟ್ಟಡ ಅಂತೆಯೇ ಇತರ ಬೃಹತ್ ಸೌಧಗಳ ನಿರ್ಮಾಣ ಕೈಗೊಳ್ಳುವಾಗ ಅಸ್ತಿಭಾರದ ಶೋಧನೆಗೂ ಭೂಭೌತ ವಿಧಾನಗಳು ಬಳಕೆ ಆಗುತ್ತಿದೆ. ಭೂಮಿಯಲ್ಲಿ ಅಧಿಕ ಶಾಖ ಪ್ರಮಾಣ ತೋರಿಸುವ ಪ್ರದೇಶಗಳನ್ನು ಗುರುತಿಸುವುದರಲ್ಲಿ, ಭೂಮಿಯೊಳಗೆ ಹುದುಗಿರುವ ಅಂತರ್ಜಲವನ್ನು ಪತ್ತೆ ಹಚ್ಚುವುದರಲ್ಲಿ ಮತ್ತು ಭೂಗತವಾಗಿರುವ ಪ್ರಾಚೀನ ಭಗ್ನಾವಶೇಷಗಳನ್ನು ಗುರುತಿಸುವುದರಲ್ಲಿ ಭೂಭೌತ ಸರ್ವೇಕ್ಷಣೆ ಉಪಯೋಗಕ್ಕೆ ಬರುತ್ತದೆ.

	ಈ ಕ್ರಿಯೆಯಲ್ಲಿ ಶಿಲೆ ಅಥವಾ ಖನಿಜಗಳ ಸಾಂದ್ರತೆ, ವಿದ್ಯುದ್ವಾಹಕತೆ, ಕಾಂತತೆ, ವಿಕಿರಣಪಟುತ್ವ ಮುಂತಾದ ಲಕ್ಷಣಗಳನ್ನು ಗಮನಿಸಲಾಗುತ್ತದೆ. ಉದಾಹರಣೆಗೆ ಭೂಮಿಯಲ್ಲಿ ಮರೆಯಾಗಿರುವ ಕಬ್ಬಿಣಯುತ ಖನಿಜಗಳನ್ನು ಅವುಗಳ ಕಾಂತೆಯಿಂದ ಪತ್ತೆಹಚ್ಚಬಹುದು. ಒಂದು ಪ್ರದೇಶದ ಶಿಲೆಗಳನ್ನು ಪರೀಕ್ಷಿಸುವಾಗ ಅವುಗಳ ಮಾಮೂಲಿ ಲಕ್ಷಣಗಳ ನಡುವೆ ಕೆಲವು ವೈಪರೀತ್ಯಗಳು ಅಲ್ಲಿ ಇಲ್ಲಿ ಮೇಲೆದ್ದು ತೋರುವುದುಂಟು. ಭೂಭೌತ ಸರ್ವೇಕ್ಷಣೆಯಲ್ಲಿ ಈ ಬಗೆಯ ವೈಪರೀತ್ಯಗಳಿಗೆ ವಿಶೇಷ ಮಹತ್ತ್ವ ಉಂಟು. ವಾಸ್ತವವಾಗಿ ಇವನ್ನು ಪತ್ತೆ ಹೆಚ್ಚುವುದೇ ಈ ಸರ್ವೇಕ್ಷಣೆಯ ಗುರಿ. ಇವು ಕ್ಷೀಣವಾಗಿರಬಹುದು. ಅಥವಾ ಪ್ರಬಲವಾಗಿರಬಹುದು. ಕ್ಷೀಣವಾಗಿದ್ದರೆ ವೈಪರೀತ್ಯಕ್ಕೆ ಕಾರಣವಾದ ಖನಿಜ ನಿಕ್ಷೇಪ ಆಳದಲ್ಲಿ ಹುದುಗಿ ಹೋಗಿರಬಹುದು ಅಥವಾ ಅಷ್ಟೇನೂ ದೊಡ್ಡ ಪರಿಮಾಣದಲ್ಲಿ ಇಲ್ಲದಿರಬಹುದು; ಪ್ರಬಲವಾಗಿದ್ದರೆ ಅಲ್ಲಿಯೇ ಹತ್ತಿರದಲ್ಲಿ ದೊಡ್ಡದೊಂದು ನಿಕ್ಷೇಪವೊಇರುವುದು ಸಾಧ್ಯ. ಬಗೆಬಗೆಯ ವೈಪರೀತ್ಯಗಳನ್ನು ಗುರುತಿಸುವ ಸಲುವಾಗಿ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಬಲ್ಲ ಅತ್ಯುತ್ತಮ ವಿಧಾನಗಳನ್ನೂ ಯಂತ್ರಸಾಧನಗಳನ್ನೂ ಬಳಸಬೇಕಾಗುತ್ತದೆ. ಅಸ್ತಿಭಾರ ಶೋಧನೆ, ನೆಲದಲ್ಲಿಯ ಜಲ ಶೋಧನೆ ಮುಂತಾದ ಕೆಲಸಗಳಿಗೆ ಸಾಮಾನ್ಯ ಯಂತ್ರೋಪಕರಣಗಳೇ ಸಾಕಾಗುತ್ತವೆ. ಅತ್ಯಂತ ಆಳದಲ್ಲಿ, ಅಂದರೆ 1ರಿಂದ 8 ಕಿ.ಮೀ ಆಳಗಳಲ್ಲಿ, ಹುದುಗಿರುವ ಪೆಟ್ರೋಲನ್ನು ಎಣ್ಣೆ ಪತ್ತೆ ಹಚ್ಚುವುದರಲ್ಲಿ ಹೆಚ್ಚಿನ ಯಂತ್ರ ಸಂಧಾನ ಕೌಶಲದ ಆವಶ್ಯಕತೆ ಇರುತ್ತದೆ.

	ವಿದ್ಯುತ್ತು ಮತ್ತು ವಿದ್ಯುತ್‍ತ್ಕಾಂತತೆ ಅವಲಂಬಿಸಿದ ಅನ್ವೇóಷಣೆ: ಕೆಲವು ಬಗೆಯ ಶಿಲೆಗಳು ಮತ್ತು ಲೋಹ ಖನಿಜಗಳು ವಿದ್ಯುತ್ತನ್ವು ಸುಲಭವಾಗಿ ಹಾಯಗೊಡುತ್ತವೆ. ಇನ್ನು ಕೆಲವು ಹಾಯಗೊಡದೆ ಜಡವಾಗಿರುತ್ತವೆ. ಈ ಲಕ್ಷಣ ಅವಲಂಬಿಸಿ ಲೋಹಮಯ ಶಿಲೆಗಳನ್ನೂ ಖನಿಜ ನಿಕ್ಷೇಪಗಳನ್ನೂ ಪತ್ತೆ ಹಚ್ಚಲು ಸಾಧ್ಯವಾಗಿದೆ. ಕೆಲವು ಖನಿಜಗಳು ತಾವಾಗಿವೇ ವಿದ್ಯುತ್ತ ರಂಗಗಳನ್ನು ಹೊಮ್ಮಿಸುತ್ತವೆ. ಇವನ್ನು ಗುರುತಿಸುವುದರಿಂದ ಅಲ್ಲಿಯೇ ಆಳದಲ್ಲಿ ಹುದುಗಿರುವ ಖನಿಜ ತೀರ ಹೆಚ್ಚಿನ ಆಳಗಳಲ್ಲಿ ಹುದುಗಿದ್ದರೆ ಈ ವಿದ್ಯುದನ್ವೇಷಣೆ ಪ್ರಯೋಜನಕಾರಿಯಾಗದು. ಸುಮಾರು 100 ಮೀಟರುಗಳ ಒಳಗೆ ಅಡಗಿರುವ ಖನಿಜ ನಿಕ್ಷೇಪಗನ್ನು ಪತ್ತೆ ಹಚ್ಚುವುದರಲ್ಲಿ ಮಾತ್ರ ಈ ವಿಧಾನ ವಿಶೇಷವಾಗಿ ಬಳಕೆಯಲ್ಲಿದೆ.

	ವಿಕಿರಣಪಟುತ್ವ ಆಧರಿಸಿದ ಸರ್ವೇಕ್ಷಣೆ: ಯುರೇನಿಯಮ್, ತೋರಿಯಮ್, ಪೊಟಾಸಿಯಮ್ ಮುಂತಾದವು ವಿಕಿರಣಪಟು ಧಾತುಗಳು. ಈ ಗುಣ ಆಧರಿಸಿ ಇವುಗಳ ನೆಲೆ ಶೋಧಿಸಿ ಇವನ್ನೊಳಗೊಂಡಿರುವ ಖನಿಜ ನಿಕ್ಷೇಪಗಳನ್ನು ಗುರುತಿಸಬಹುದು.

ಕಾಂತತೆ ಅವಲಂಬಿಸಿದ ಸರ್ವೇಕ್ಷಣೆ: ಕಾಂತತ್ವಯುಕ್ತ ಶಿಲೆಗಳನ್ನು ಕಾಂತತ್ವ ಮಾಪಕ ಉಪಕರಣಗಳ ಸಹಾಯದಿಂದ ಪತ್ತೆ ಹಚ್ಚಬಹುದು. ಜಲದಲ್ಲಿ ನಿಕ್ಷೇಪಗೊಂಡ ಶೀಲಗಳ ಕಾಂತತೆ ಕಡಿಮೆ. ಆದರೆ ಜಲದಲ್ಲಿ ಶೇಖರಗೊಂಡ ಸ್ತರಗಳ ಬುಡದಲ್ಲಿರುವ ಅಗ್ನಿಶಿಲೆಗಳ ಕಾಂತತೆ ಹೆಚ್ಚು. ಈ ಕಾರಣದಿಂದ ಜಲಸ್ತರಗಳ ಮಂದ ಮತ್ತು ತಳದಲ್ಲಿಯ ಅಗ್ನಿಶಿಲೆ ಎಷ್ಟು ಆಳದಲ್ಲಿದೆ ಎನ್ನುವ ವಿವರಗಳನ್ನು ರಂಧ್ರ ಕೊರೆಯದೆ ಮೇಲೆ ಕುಳಿತೇ ಹೇಳಬಹುದು. ಕಾಂತತ್ವ ಮಾಪಕ ಸೂಕ್ಷೋಪಕರಣಗಳನ್ನು ವಿಮಾನಕ್ಕೆ ಜೋಡಿಸಿ ವಿಸ್ತಾರ ಪ್ರದೇಶದ ವೈಮಾನಿಕ ಸರ್ವೇಕ್ಷಣೆ ಮಾಡಲಾಗುವುದು. ಕಾಂತತೆ ಹೆಚ್ಚಿರುವ ಪ್ರದೇಶಗಳಲ್ಲಿ ಕಾಂತೀಯ ರೇಖೆಗಳು ದಟ್ಟವಾಗಿ ಕವಿದಿರುತ್ತವೆ. ಇವು ನಿಕ್ಷೇಪಗಳಿರುವ ಸ್ಥಳವನ್ನು ಸೂಚಿಸುತ್ತವೆ.
ಗುರುತ್ವಾವಲಂಬಿತ ಸರ್ವೇಕ್ಷಣೆ: ಭೂಮಿಯಲ್ಲಿ ದೊರೆಯುವ ಶಿಲೆಗಳ ಸಾಂದ್ರತೆ ಒಂದೇ ಸಮನಾಗಿರುವುದಿಲ್ಲ. ಕೆಲವು ಹಗುರ, ಕೆಲವು ಗಡಸು, ಕೆಲವು ಹೆಚ್ವು ತೂಕದವು. ಇವುಗಳ ಸಾಂದ್ರತೆಯಲ್ಲಿ ವ್ಯತ್ಯಾಸವಿರುವುದು. ಸಾಂದ್ರತೆ ಹೆಚ್ಚಿದಂತೆ ಗುರುತ್ವ ಬಲ ಹೆಚ್ಚುತ್ತದೆ. ಭೂಭಾಗದ ಮೇಲೆ ಗುರುತ್ವ ಬಲ ಯಾವ ರೀತಿ ಹರಡಿದೆ ಎನ್ನುವುದನ್ನು ಉಪಕರಣಗಳಿಂದ ಗುರುತಿಸಿ ನಕ್ಷೆಗಳನ್ನು ತಯಾರಿಸಬಹುದು. ಅತಿ ಹೆಚ್ಚಿನ ಸಾಂದ್ರತೆ ಇರುವ ಲೋಹಮಯ ಖನಿಜಗಳ ನೆಲೆಯನ್ನು ಹೀಗೆ ಪತ್ತೆ ಹಚ್ಚಬಹುದು. ಪೆಟೋಲ್ ಅನ್ವೇಷಣೆಯಲ್ಲಿ ಈ ವಿಧಾನ ಬಹುವಾಗಿ ಬಳಕೆಗೆ ಬರುತ್ತಿದೆ.

ಭೂಕಂಪನಾಧಾರಿತ ಸರ್ವೇಕ್ಷಣೆ: ನೆಲದೊಳಗಿನ ಶಿಲಾಪದರಗಳ ವಿನ್ಯಾಸ ತಿಳಿಯಲು ಭೂಕಂಪನ ಮಾಪಕ ಸಹಾಯ ಮಾಡುತ್ತದೆ. ನೆಲದಡಿಯಲ್ಲಿ ಸಿಡಿಮದ್ದು ಹೊಟ್ಟಿಸಿ ಅದರಿಂದ ಉಂಟಾದ ಅಲೆಗಳು ಭೂಮಿಯೊಳಗೆ ಹಾಯುವ ಪಥ ಗಮನಿಸಿ ಅಲ್ಲಿಯ ಲಕ್ಷಣಗಳನ್ನು ತಿಳಿಯುವುದು ಇಲ್ಲಿಯ ವಿಧಾನ. ಉದಾಹರಣೆಗೆ, ಭೂಮಿಯೊಳಗಿನ ಶಿಲಾಪದರಗಳು ಗಡಸಾಗಿರಬಹುದು. ಸಾಂದ್ರ ಅಗ್ನಿಶಿಲೆಗಳಿಂದ ಕೂಡಿರಬಹುದು. ಇಲ್ಲವೆ, ಹಸಿಮಣ್ಣಿನಿಂದ ತುಂಬಿರಬಹುದು. ಭೂಕಂಪನ ದೀರ್ಘತರಂಗ ವಿವಿಧ ಸಾಂದ್ರತೆಗಳ ಶಿಲಾಪದರಗಳನ್ನು ಮುಟ್ಟಿದ ಕೂಡಲೆ ಮುಂದುವರಿಯದೆ ಹಿಂದಕ್ಕೆ ವಾಪಸಾಗುತ್ತದೆ. ಹೀಗೆ ಕೃತಕವಾಗಿ ಹೊರಡಿಸಿದ ಅಲೆಗಳು ಶಿಲಾಪದರಗಳನ್ನು ಮುಟ್ಟಿ ಹಿಂತಿರುಗುವ ಕಾಲ ಗುರುತಿಸಿದರೆ ಅಲ್ಲಲ್ಲಿ ಹುದುಗಿರುವ ಶಿಲಾಪದರಗಳ ರಚನೆ ತಿಳಿಯಲು ಸಾಧ್ಯವಾಗುತ್ತದೆ. ಭೂಮಿಯೊಳಗೆ ಶಿಲಾಪದರಗಳು ಮಡಿಕೆ ಬಿದ್ದು ಗೂಡುಗಳು ಮತ್ತು ಬಿಲಗಳು ಉಂಟಾಗಿರುತ್ತವೆ. ಇವುಗಳಲ್ಲಿ ಪೆಟ್ರೋಲ್ ಶೇಖರವಾಗಿರುವುದುಂಟು. ಇಂಥ ಬಿಲಗಳನ್ನು ಪತ್ತೆ ಹಚ್ಚಿ ಪೆಟ್ರೋಲ್ ಶೇಖರವಾಗಿರುವ ಸ್ಥಳಗಳನ್ನು ಗುರುತಿಸಲು ಭೂಕಂಪನ ಮಾಪಕ ವಿಶೇಷವಾಗಿ ಬಳಕೆಯಾಗುತ್ತದೆ.

ಮೇಲೆ ವಿವರಿಸಿರುವ ವಿಧಾನಗಳಿಂದ ಭೂಮಿಯೊಳಗೆ ಆಳವಾಗಿ ಹುದುಗಿರಬಹುದಾದ ನಿಕ್ಷೇಪಗಳನ್ನು ಗುರುತಿಸುವುದು ಸಾಧ್ಯ. ಭೂಭೌತ ಸರ್ವೇಲಕ್ಷಣಗಳ ವ್ಯತ್ಯಾಸಕ್ಕೆ ಕಾರಣವಾಗಬಹುದಾದ ನಿಕ್ಷೇಪದ ಕಡೆ ಬೆಟ್ಟು ಮಾಡಿ ತೋರಿಸುತ್ತದೆ, ಅಷ್ಟೆ. ಈ ಸೂಚನೆಯ ಆಧಾರದ ಮೇಲೆ ಭೂಮಿಯೊಳಗೆ ರಂಧ್ರಗಳನ್ನು ಕೊರೆದು ಅಥವಾ ಗಣಿಗಳನ್ನು ತೋಡಿ ಭೂಭೌತ ವೈಪರೀತ್ಯಗಳು ಯಾವ ಕಾರಣದಿಂದ ಉಂಟಾಗಿರಬಹುದು ಎನ್ನುವುದನ್ನು ತಿಳಿಯಬೇಕಾಗುತ್ತದೆ.		
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ